ಕ್ಯು ಜ್ವರ

ಕ್ವೀನ್ಸ್‍ಲೆಂಡ್ ಜ್ವರ ಅಥವಾ ಪ್ರಶ್ನಾರ್ಥಕ ಜ್ವರ ಎಂಬುದರ ಸಂಕ್ಷಿಪ್ತ ಹೆಸರು. ಡೆರಿಕ್ ಎಂಬಾತ 1937ರಲ್ಲಿ ಮೊತ್ತಮೊದಲ ಬಾರಿಗೆ ಕ್ವೀನ್ಸ್‍ಲೆಂಡಿನ ಬ್ರಿಸ್ಬೇನ್ ಕಾರ್ಮಿಕರಲ್ಲಿ ಈ ರೋಗ ಬರುವುದೆಂದು ಕಂಡುಹಿಡಿದುದಲ್ಲದೆ ಗಿನಿಹಂದಿಗಳಲ್ಲಿ ಈ ರೋಗದ ಕಾರಕಗಳಿರುವುದನ್ನು ಕಂಡು ಅವನ್ನು ಬೇರ್ಪಡಿಸಿದ. ಈ ಕಾರಕ ಕಾಕ್ಸಿಯೆಲ್ಲ (ಸಿ) ಬರ್ನೆಟಿ ಎಂಬ ರಿಕೆಟ್ಸಿಯ-ತರ ಸೂಕ್ಷ್ಮಾಣುಜೀವಿಯೆಂದು ಅನಂತರ ಗೊತ್ತುಪಡಿಸಲಾಯಿತು. ಪ್ರಪಂಚದ ಬಹುಪಾಲು ದೇಶಗಳಲೆಲ್ಲ ಇದರ ವ್ಯಾಪ್ತಿಯಿದೆ. ದನಕರುಗಳು, ಕುರಿ ಮೇಕೆ ಮತ್ತು ಮಾನವರಲ್ಲಿ ಇದರ ಸೋಂಕು ಬಹಳ. ನಾಯಿ, ಕುದುರೆ, ಪಾರಿವಾಳ, ಬಾತು, ಕೋಳಿ ಮತ್ತು ಕೆಲವು ವನ್ಯಪ್ರಾಣಿಗಳಲ್ಲೂ ಇದು ಇರುವುದು ಕಂಡುಬಂದಿದೆ. ಪ್ರಾಣಿಗಳು ಮತ್ತು ಪ್ರಾಣಿ ಉತ್ಪನ್ನಗಳೊಂದಿಗೆ ಸಂಪರ್ಕವಿರುವವರಲ್ಲಿ ಈ ರೋಗ ಹೆಚ್ಚು ತೀಕ್ಷ್ಣ.

ದನಕರುಗಳು ಮತ್ತು ಕುರಿಗಳ ಸಂಪರ್ಕದ ಮೂಲಕವಾಗಿ ಈ ಅಣುಜೀವಿಯ ಸೋಂಕು ತಗುಲಿದ ದೂಳಿನ ಮತ್ತು ಪದಾರ್ಥಗಳ ಸೇವನೆಯಿಂದ ರೋಗ ತಲೆದೋರುತ್ತದೆ. ದೇಹದಲ್ಲಿ ಒಂದೆರಡು ವಾರ ಹುದುಗಿ ಕುಳಿತು ಬೆಳೆದ ಮೇಲೆ, ರೋಗದ ಲಕ್ಷಣಗಳು ಏಕಾಏಕಿಯಾಗಿ ಕಾಣಿಸಿಕೊಳ್ಳತೊಡಗುತ್ತವೆ. ಪ್ರಾರಂಭದಲ್ಲಿ ಜ್ವರ, ವಿಪರೀತ ತಲೆನೋವು, ಸುಸ್ತು, ಮೈಕೈ ನೋವು ಮತ್ತು ಆಹಾರದಲ್ಲಿ ನಿರಾಸಕ್ತಿ ಇದ್ದು ಕೆಲವು ದಿನಗಳಲ್ಲಿ ಕೆಮ್ಮು ಮತ್ತು ಉಬ್ಬಸ ತೋರಿಬರುತ್ತದೆ. ಬಲುಬೇಗ ತೂಕ ಕಡಿಮೆಯಾಗುತ್ತದೆ. ನಾಡಿ ಮಿಡಿತ ಮಂದವಾಗುತ್ತದೆ. ಎದೆಬಡಿತವನ್ನಾಲಿಸಿದಾಗ ಶ್ವಾಸೋಚ್ಛ್ವಾಸದೊಡನೆ ಪಿಟಿಪಿಟಿ ಶಬ್ದಗಳು ಕೇಳಿಬರುತ್ತವೆ. ಎದೆಯ ಎಕ್ಸ್‍ಕಿರಣ ಚಿತ್ರದಲ್ಲಿ ಅಪಾರಕ ಛಾಯೆಗಳು ಅಲ್ಲಲ್ಲಿ ಹರಡಿರುವುದು ಕಾಣಿಸುತ್ತವೆ.

ರೋಗದಿಂದ ಚೇತರಿಸಿಕೊಳ್ಳುವಾಗ ರಕ್ತರಸದಲ್ಲಿ ರೋಗದ ವಿರುದ್ಧದ ಪ್ರತಿವಸ್ತುಗಳ ಸಂಖ್ಯೆ ಏರಿರುವುದು ರೋಗದ ಕುರುಹಾಗಿ ಉಳಿಯುತ್ತದೆ. ಹೃದಯದ ಒಳಪದರಿನ ಉರಿ ಕೆಲವರಲ್ಲಿ ಪ್ರಮುಖ ತೊಡಕಾಗಿ ತೋರಿಬರಬಹುದು. ಇನ್ನು ಕೆಲವರಲ್ಲಿ ರೋಗದಿಂದ ಚೇತರಿಸಿಕೊಳ್ಳಲು ದೀರ್ಘಾವಧಿ ಸಮಯ ಹಿಡಿಯಬಹುದು. ರೋಗ ಸ್ವಯಂತಹಬಂದಿಗೆ ಬರಬಲ್ಲದು.

ಡೊಕ್ಸಿಸೈಕ್ಲಿನನ್ನು ಮೊದಲನೆ ದಿನ 200 ಮಿ.ಗ್ರಾಂ, ನಂತರ ಎರಡು ವಾರಗಳು ಪ್ರತಿದಿನ 100 ಮಿ. ಗ್ರಾಂ. ಪ್ರಮಾಣದಲ್ಲಿ ಬಾಯಿಂದ ಕೊಡಬೇಕು. ಅದರ ಬದಲು ಪ್ರತಿ 6 ಘಂಟೆಗೆ 500 ಮಿ. ಗ್ರಾಂ. ನಂತೆ ಟೆಟ್ರಸೈಕ್ಲಿನನ್ನು ಎರಡು ವಾರ ಕೊಟ್ಟರೂ ಈ ಸೋಂಕು ದೂರವಾಗುತ್ತದೆ.
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ